ರಾಮಕೃಷ್ಣ ಮಿಷನ್
ಸಾಮಾಜಿಕ ಸೇವೆಯಲ್ಲಿ ನಿರತವಾದ ಧಾರ್ಮಿಕ ಸಂಸ್ಥೆ, ಕಲ್ಕತ್ತದಲ್ಲಿ 1897 ಮೇ 1ರಂದು ಸ್ವಾಮಿವಿವೇಕಾನಂದರು ಈ ಸಂಸ್ಥೆಯನ್ನು ಸ್ಥಾಪಿಸಿದರು. ರಾಮಕೃಷ್ಣ ಪರಮಹಂಸರ (ನೋಡಿ- ರಾಮಕೃಷ್ಣ-ಪರಮಹಂಸ) ಬೋಧನೆಗಳನ್ನು ಪ್ರಚಾರಪಡಿಸುವುದು ಮತ್ತು ಭಾರತೀಯರ ಸಾಮಾಜಿಕ ಪರಿಸ್ಥಿತಿಯನ್ನು ಸುಧಾರಿಸುವುದು ಈ ಸಂಸ್ಥೆಯ ಎರಡು ಮುಖ್ಯ ಉದ್ದೇಶಗಳು.         

	ರಾಮಕೃಷ್ಣರ ನಿಧನದ ಬಳಿಕ(1886) ಅವರ ಅವಿವಾಹಿತ ಶಿಷ್ಯರಲ್ಲಿ ಕೆಲವರು ತಮ್ಮ ಕುಟುಂಬ ಜೀವನಕ್ಕೆ ಹಿಂದಿರುಗದೆ ತ್ಯಾಗ ಮತ್ತು ಸಾಧನೆಯ ಜೀವನವನ್ನೇ ಮುಂದುವರಿಸಲು ನಿರ್ಧರಿಸಿದರು. ಕಲ್ಕತ್ತದ ಬಾರಾನಗರ ಎಂಬ ಸ್ಥಳದಲ್ಲಿದ್ದ ಪಾಳು ಮನೆಯೊಂದರಲ್ಲಿ ಇವರೆಲ್ಲ ಕಲೆತು ಕಠೋರ ತಪಸ್ಸಿನ ಜೀವನವನ್ನು ಪ್ರಾರಂಭಿಸಿದರು. ರಾಮಕೃಷ್ಣರು ಭಕ್ತರು ಇವರಿಗೆಲ್ಲ ಆರ್ಥಿಕ ನೆರವು ನೀಡುತ್ತಿದ್ದರು. ಹೀಗೆ ಸಂನ್ಯಾಸಿ ಮತ್ತು ಭಕ್ತರು ನಿಕಟ ಬಾಂಧವ್ಯ ಮೊದಲಾಯಿತು. ಇವರಿಗೆಲ್ಲ ಸ್ಫೂರ್ತಿಯ ಮುಂದಾಳು ನರೇಂದ್ರ(ವಿವೇಕಾನಂದ). ಬಾರಾನಗರದ ಪಾಳುಮನೆಯನ್ನೇ ರಾಮಕೃಷ್ಣ ಸಂಘದ ಪ್ರಥಮ ಸಂನ್ಯಾಸಿ ಮಠವೆಂದು ಕರೆಯಬಹುದಾಗಿದೆ.   

	1897 ಮೇ 1ರಂದು ರಾಮಕೃಷ್ಣರ ಆಪ್ತ ಭಕ್ತರಾದ ಬಲರಾಮಬೋಸರ ಮನೆಯಲ್ಲಿ ಸಂನ್ಯಾಸಿ ಮತ್ತು ಭಕ್ತರೆಲ್ಲರೂ ಒಂದೆಡೆ ಸೇರಿದರು. ಸ್ವಾಮಿ ವಿವೇಕಾನಂದರ ನೇತೃತ್ವದ ಆ ಸಭೆಯಲ್ಲಿ ರಾಮಕೃಷ್ಣ ಮಹಾಸಂಘ ಸ್ಥಾಪನೆಯ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಸಂಘದ ಮೂಲ ಉದ್ದೇಶಗಳು ಎರಡು: 1 ರಾಮಕೃಷ್ಣರ ಜೀವನವನ್ನು ಆದರ್ಶವಾಗಿಟ್ಟುಕೊಂಡು ತ್ಯಾಗ ಮತ್ತು ಆಧ್ಯಾತ್ಮಿಕ ಸಾಧನೆಯ ಪರಿಶುದ್ಧ ಜೀವನವನ್ನು ನಡೆಸುವ ಸಂನ್ಯಾಸಿ ವೃಂದವನ್ನು ಸೃಷ್ಟಿಸುವುದು. 2 ಗೃಹಸ್ಥ ಭಕ್ತರ ಸಹಾಯದೊಂದಿಗೆ ಜಾತಿ, ಮತ, ಜನಾಂಗ, ಲಿಂಗಭೇದಗಳಿಲ್ಲದೆ ಸಮಾಜದ ಬೇರೆ ಬೇರೆ ಸೇವಾಕಾರ್ಯಗಳಲ್ಲಿ ತೊಡಗುವುದು. `ತನ್ನ ಮೋಕ್ಷ ಸಾಧನೆಯ ಜೊತೆಗೆ ಜಗತ್ತಿನ ಹಿತಸಾಧನೆಗೆ ಶ್ರಮಿಸಬೇಕು ಎಂಬ ಸ್ವಾಮಿ ವಿವೇಕಾನಂದರ ಮಾತಿನಲ್ಲಿ ಸಂಘದ ಧ್ಯೇಯೋದ್ದೇಶ ಅಡಗಿದೆ.   

	ರಾಮಕೃಷ್ಣ ಮಹಾಸಂಘಕ್ಕೆ ಎರಡು ಮುಖ್ಯ ಶಾಖೆಗಳಿವೆ: ಒಂದು ರಾಮಕೃಷ್ಣ ಮಠ ಮತ್ತೊಂದು ರಾಮಕೃಷ್ಣಮಿಷನ್. ರಾಮಕೃಷ್ಣಮಠದ ಕಾರ್ಯವ್ಯಾಪ್ತಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಿಗೆ ಸೀಮಿತವಾಗಿದೆ. ರಾಮಕೃಷ್ಣ ಮಿಷನ್ ಶಿಕ್ಷಣವೇ ಮೊದಲಾದ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ನಿರತವಾಗಿದೆ. ಪ್ರಪಂಚದಾದ್ಯಂತ ಈ ಎರಡೂ ಶಾಖೆಗಳ 135 ಕೆಂದ್ರಗಳೂ 30 ಉಪಕೇಂದ್ರಗಳೂ ಇವೆ. ಇವುಗಳ ಪ್ರಧಾನ ಕೇಂದ್ರ ಕಲ್ಕತ್ತದ ಸಮೀಪವಿರುವ ಬೇಲೂರು ಮಠ.      
 
   ಮಹಾಸಂಘದ ಸದಸ್ಯರು ಆಧ್ಯಾತ್ಮಿಕ ಸಾಧನೆಯ ವಿಷಯದಲ್ಲಿ ಅನುಸರಿಸುವುದು ರಾಮಕೃಷ್ಣರ ಸಮನ್ವಯ ತತ್ತ್ವವನ್ನು ಯಾವುದೇ ಧರ್ಮ ಮತ ಮತ್ತು ಸಂತರ ಉಪಯುಕ್ತ ಸಲಹೆಗಳನ್ನು ಇವರು ಉದಾರ ಮನೋಭಾವದಿಂದ ಸ್ವೀಕರಿಸುತ್ತಾರೆ. ಸಾಧನೆ, ಕರ್ಮ ಮತ್ತು ಶಾಸ್ತ್ರಾಧ್ಯಯನ ಈ ಮೂರಕ್ಕೂ ಸಮಾನವಾದ ಪ್ರಾಧಾನ್ಯತೆ ಕೊಡಲಾಗಿದೆ. ದುಡಿಮೆಯೇ ಪ್ರಾರ್ಥನೆ, ಆತ್ಮನಿಗ್ರಹವೇ ತ್ಯಾಗ, ಇಡೀ ಜೀವನವೇ ಧರ್ಮ-ಇವು ರಾಮಕೃಷ್ಣ ಮಹಾಸಂಘದ ಆದರ್ಶಗಳು.   

	ಪ್ರತಿಯೊಬ್ಬ ವ್ಯಕ್ತಿಯ ಸರ್ಮತೋಮುಖ ಬೆಳೆವಣಿಗೆಯ ಮೂಲಸೂತ್ರವಾದ ನಾಲ್ಕು ಯೋಗಗಳ ಸಮನ್ವಯ ಮಾರ್ಗವನ್ನು ಸಂಘವು ಅನುಸರಿಸುತ್ತದೆ. ಇದನ್ನು ಸಾಂಕೇತಿಕವಾಗಿ ಪ್ರತಿನಿಧಿಸುವ ಮಹಾಸಂಘದ ಚಿಹ್ನೆ ಅಥವಾ ಲಾಂಛನ ರಚಿಸಿದವರು ಸ್ವಾಮಿ ವಿವೇಕಾನಂದರು. ಈ ಚಿಹ್ನೆಯಲ್ಲಿ ಕಾಣುವ ಸರೋವರದ ಅಲೆಗಳು ಕರ್ಮವನ್ನೂ ಕಮಲವು ಭಕ್ತಿಯನ್ನೂ ಉದಯಿಸುತ್ತಿರುವ ಸೂಯ್ e್ಞÁನವನ್ನೂ ಸುತ್ತಿಕೊಂಡಿರುವ ಸರ್ಪ ಯೋಗ ಹಾಗೂ ಜಾಗೃತ ಕುಂಡಲಿನೀ ಶಕ್ತಿಯನ್ನೂ ಪ್ರತಿನಿಧಿಸುತ್ತವೆ. ಹಂಸ ಪರಮಾತ್ಮನ ಪ್ರತೀಕ, ಕರ್ಮ, ಭಕ್ತಿ, e್ಞÁನ ಮತ್ತು ಯೋಗ ಇವುಗಳ ಸಮನ್ವಯದ ಮೂಲಕ ಪರಮಾತ್ಮನ ದರ್ಶನ ಲಾಭವಾಗುತ್ತದೆ ಎಂಬುದು ಅದರ ಭಾವಾರ್ಥ.   

	ಮಹಾಸಂಘ ಮತೀಯವಾದುದಲ್ಲ. ಜಾತಿ ಮತ್ತು ಮತ ಲಿಂಗಭೇದಗಳಿಲ್ಲದೆ ಎಲ್ಲರನ್ನೂ ಅದು ಒಳಗೊಂಡಿದೆ. ಕೋಮು ಸಂಬಂಧದ ಚಟುವಟಿಕೆಗಳಲ್ಲಿ ಈ ಸಂಸ್ಥೆ ಭಾಗವಹಿಸುವುದಿಲ್ಲ. ಯಾವುದೇ ರೀತಿಯ ಪವಾಡಗಳಿಗೂ ರಹಸ್ಯ ಸಿದ್ಧಾಂತಗಳಿಗೂ ಸಂಘ ಮನ್ನಣೆ ನೀಡುವುದಿಲ್ಲ. ಎಷ್ಟೇ ಸಾಮಾಜಿಕ ಸೇವೆಯಲ್ಲಿ ಕಾರ್ಯ ನಿರತವಾಗಿದ್ದರೂ ರಾಜಕೀಯ ರಂಗದೊಂದಿಗೆ ಸಂಘ ಯಾವ ಸಂಬಂಧವನ್ನೂ ಇಟ್ಟುಕೊಂಡಿಲ್ಲ. ಸಂಘ ಆಧುನಿಕ ಮನೋಭಾವವನ್ನು ಹೊಂದಿದ್ದು ವೈe್ಞÁನಿಕ ಮತ್ತು ವೈಚಾರಿಕ ಪ್ರವೃತ್ತಿಯನ್ನು ಅನುಸರಿಸುತ್ತದೆ. ಮೂಡನಂಬಿಕೆ, ಮಡಿವಂತಿಕೆ, ಜಾತಿನಿಯಮ-ಇವುಗಳಿಗೆ ಸಂಘದಲ್ಲಿ ಅವಕಾಶವಿಲ್ಲ. `ಶಿವe್ಞÁನೇ ಜೀವ ಸೇವಾ ಎಂಬ ರಾಮಕೃಷ್ಣರ ಸೂತ್ರೂಪ ಹೇಳಿಕೆಯೆ ಮಹಾಸಂಘದ ಸೇವಾ ಕಾರ್ಯಗಳ ನಿರ್ದಿಷ್ಟ ತತ್ತ್ವವಾಗಿದೆ. ರಾಮಕೃಷ್ಣ ಮಹಾಸಂಘದ ಸಾಮಾಜಿಕ ಚಟುವಟಿಕೆಗಳಲ್ಲಿ ಶಿಕ್ಷಣ ಕ್ಷೇತ್ರ ಪ್ರಮುಖವಾದುದು. ಸ್ವಾಮಿ ವಿವೇಕಾನಂದರ ಶಿಕ್ಷಣತತ್ತ್ವವನ್ನು ಅನುಸರಿಸುವುದು ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳೆವಣಿಗೆಯೆ ಇದರ ಪ್ರಧಾನ ಗುರಿ. ದೇಶದಾದ್ಯಂತ ನೂರಾರು ಆದರ್ಶ ಶಿಕ್ಷಣ ಸಂಸ್ಥೆಗಳನ್ನು ಸಂಘ ನಡೆಸುತ್ತಿದೆ. ವಿವಿಧ ಪದವಿ ಕಾಲೇಜುಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ವೈದ್ಯಕೀಯ, ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ಅನಾಥಾಶ್ರಮಗಳು, ವಯಸ್ಕರ ಶಿಕ್ಷಣ ಕೇಂದ್ರಗಳು, ಕೃಷಿ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳು ಸೇವಾಕಾರ್ಯದಲ್ಲಿ ಸೇರಿವೆ. ಭಾರತದ ವಿವಿಧೆಡೆ 655 ಶಿಕ್ಷಣ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಒಂದೂವರೆ ಲಕ್ಷ ವಿದ್ಯಾರ್ಥಿಗಳು ಈ ಶಿಕ್ಷಣ ಸಂಸ್ಥೆಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ.       

	ಮಹಾಸಂಘದ ಇನ್ನೊಂದು ಸೇವಾಕಾರ್ಯದ ಮುಖ್ಯಕ್ಷೇತ್ರ ವೈದ್ಯಕೀಯ ಸೇವೆ. ವಾರಾಣಸಿ ಕಂಖಲ್‍ಗಳಲ್ಲಿ ಸೇವಾಶ್ರಮಗಳನ್ನು ಪ್ರಾರಂಭಿಸಿ ಬಡಜನರಿಗೆ, ಸಾಧುಗಳಿಗೆ ಉಚಿತವಾಗಿ ಔಷದೋಪಚಾರದ ನೆರವನ್ನು ಒದಗಿಸಲಾಗುತ್ತಿದೆ.  ಕ್ರಮೇಣ ಈ ಸೇವಾಶ್ರಮಗಳ ಕಾರ್ಯವ್ಯಾಪ್ತಿ ವಿಸ್ತರಿಸಲಾಗಿದೆ. ಇಂದು ದೇಶಾದ್ಯಂತ ಅನೇಕ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು, ಶಿಶುಕಲ್ಯಾಣ ಕೇಂದ್ರಗಳು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಬಡಜನರಿಗೆ ವೈದ್ಯಕೀಯ ಸೇವಾ ಸೌಲಭ್ಯಗಳನ್ನು ಒದಗಿಸುವುದರಲ್ಲಿ ನಿರತವಾಗಿವೆ.    

	ಪರಿಹಾರ ಕಾರ್ಯಗಳಿಂದಾಗಿಯೂ ಸಂಘ ಪ್ರಸಿದ್ಧಿ ಪಡೆದಿದೆ. ಪ್ರಕೃತಿ ವಿಕೋಪದಿಂದ ಉಂಟಾಗುವ ಕ್ಷಾಮ, ಭೂಕಂಪ, ನೆರೆಹಾವಳಿ, ಚಂಡಮಾರುತಗಳಿಂದ ಜನರು ಸಂತ್ರಸ್ತರಾದಾಗ, ಸಾಂಕ್ರಾಮಿಕ ರೋಗಗಳಿಂದ ಪೀಡಿತರಾದಾಗ ಕೂಡಲೇ ಸಂಘ ಪರಿಹಾರ ಕಾರ್ಯವನ್ನು ಹಮ್ಮಿಕೊಳ್ಳುವುದು. ಈ ಸೇವಾ ಕಾರ್ಯ ಸಂಘದ ಅವಿಭಾಜ್ಯ ಅಂಗವಾಗಿದೆ. ಅದಕ್ಕಾಗಿ ಪ್ರತ್ಯೇಕ ನಿಧಿಯನ್ನು ಮೀಸಲಿರಿಸಿದ್ದು ಪ್ರತಿವರ್ಷ ಅಪಾರ ಹಣವನ್ನು ಪರಿಹಾರಗಳಿಗೆ ವೆಚ್ಚಮಾಡಲಾಗುತ್ತದೆ.      
	ಗ್ರಾಮೀಣ ಕಲ್ಯಾಣಕಾರ್ಯ ಮತ್ತೊಂದು ಮುಖ್ಯ ಸೇವಾ ಕ್ಷೇತ್ರವೆನಿಸಿದೆ. ಅದನ್ನು `ಪಲ್ಲಿಮಂಗಲ್ ಎಂದು ಹೆಸರಿಸಲಾಗಿದೆ. ಗ್ರಾಮೀಣ ಜನರ ಜೀವನಮಟ್ಟವನ್ನು ಉತ್ತಮ ಪಡಿಸಲು ಅವರಿಗೆ ಮೂಲಭೂತ ಆವಶ್ಯಕತೆಗಳನ್ನು ಒದಗಿಸಿಕೊಡಲಾಗುತ್ತಿದೆ. ಬೇಸಾಯದ ತರಬೇತಿ ನೀಡಲಾಗುತ್ತಿದೆ. ಸಣ್ಣ ಕೈಗಾರಿಕೆಗಳ ಮೂಲಕ ಜನರಿಗೆ ಸ್ವಂತ ಉದ್ಯೋಗವನ್ನು ಕಲ್ಪಿಸಿಕೊಡಲಾಗುತ್ತಿದೆ. ವಿವೇಕಾನಂದರು ಘೋಷಿಸಿದ ದರಿದ್ರನಾರಾಯಣರ ಸೇವಾಕಾರ್ಯದ ಕರೆಗೆ ಓಗೊಟ್ಟು, ಪ್ರಪ್ರಥಮವಾಗಿ ಹಳ್ಳಿಯಲ್ಲಿ ಸೇವಾಕಾರ್ಯ ಪ್ರಾರಂಭಿಸಿದವರು ರಾಮಕೃಷ್ಣರ ನೇರ ಶಿಷ್ಯರಾದ ಸ್ವಾಮಿ ಅಖಂಡನಂದರು. 1897 ಜುಲೈನಲ್ಲಿ ಪಶ್ಚಿಮಬಂಗಾಲದ ಮಾಹುಲಿ ಎಂಬ ಗ್ರಾಮದಲ್ಲಿ ಇವರು ಅನಾಥಾಶ್ರಮವನ್ನು ಪ್ರಾರಂಭಿಸಿದರು. ರಾಮಕೃಷ್ಣ ಸಂಘದ ಮೊಟ್ಟಮೊದಲ ಗ್ರಾಮೀಣ ಕೇಂದ್ರವನ್ನು ಪ್ರಾರಂಭಿಸಿದ್ದು ಸರ್ಗಾಚಿಯಲ್ಲಿ. ಅನಂತರ ಮಾಯಾವತಿ, ಕೋಯಲ್‍ಪಾರಾ, ನೆಟ್ಟರಂಪಳ್ಳಿ, ತ್ರಿಶ್ಯೂರು ಮುಂತಾದ ಸ್ಥಳಗಳಲ್ಲಿ ಗ್ರಾಮೀಣ ಕೇಂದ್ರಗಳು ತೆರೆಯಲಾಯಿತು. ಔದ್ಯೋಗಿಕ ತರಬೇತಿ, ಕೃಷಿಕಾರ್ಯದ ನೆರವು ಒದಗಿಸುವ ಸೇವಾ ಕೇಂದ್ರಗಳು ಕ್ರಮೇಣ ಹುಟ್ಟಿಕೊಂಡವು.   
   
	ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳನ್ನು ಸಂಘ-ಸಮಸಮವಾಗಿ ಮುಂದುವರಿಸಿಕೊಂಡು ಬರುತ್ತಿದೆ. ವಿಶೇಷ ಉಪನ್ಯಾಸಗಳು ಆಧ್ಯಾತ್ಮಿಕ ಶಿಬಿರಗಳು, ವಿವಿಧ ಉತ್ಸವಗಳು, ಭಜನೆಗಳು, ಸಂಕೀರ್ತನೆಗಳು ಇತ್ಯಾದಿಗಳ ಮೂಲಕ ಜನರ ಆವಶ್ಯಕತೆಗಳನ್ನು ಪೂರೈಸುತ್ತಿದೆ. ಇಂಗ್ಲಿಷ್, ದೇಶೀಯ ಮತ್ತು ವಿದೇಶಿಯ ಭಾಷೆಗಳಲ್ಲಿ ಪ್ರಮಾಣಭೂತವಾದ ಧಾರ್ಮಿಕ ಗ್ರಂಥಗಳನ್ನು ಪ್ರಕಟಿಸಲಾಗುತ್ತಿದೆ. ಉಪನಿಷತ್, ಭಗವದ್ಗೀತೆ ಮುಂತಾದ ಗ್ರಂಥಗಳ ಪ್ರಕಟಣೆ. ಪಾರಾಯಣಾದಿಗಳನ್ನೂ ಮಾಡಲಾಗುತ್ತಿದೆ. ರಾಮಕೃಷ್ಣ, ಶಾರದಾದೇವಿ ಮತ್ತು ಸ್ವಾಮಿವಿವೇಕಾನಂದರ ಜೀವನ ಸಂದೇಶಗಳನ್ನೊಳಗೊಂಡ ಕೃತಿಶ್ರೇಣಿಗಳನ್ನು ಪ್ರಕಟಿಸಲಾಗಿದೆ. ಸಂಘಕ್ಕೆ ಸೇರಿದಂತೆ ಒಟ್ಟು 16 ಪ್ರಕಟಣಾ ಕೇಂದ್ರಗಳಿವೆ. ಇವುಗಳಲ್ಲಿ ಕಲ್ಕತ್ತ ಮತ್ತು ಚೆನ್ನೈನಲ್ಲಿರುವ ಕೇಂದ್ರಗಳು ವಿಶೇಷವಾಗಿ ಇಂಗ್ಲಿಷ್ ಪುಸ್ತಕಗಳನ್ನು ಪ್ರಕಟಿಸುತ್ತಿವೆ. ಉಳಿದ ಕೇಂದ್ರಗಳು ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತವೆ. ಇಂಗ್ಲಿಷ್ ಮತ್ತು ಇತರ ದೇಶಭಾಷೆಗಳಲ್ಲಿ ಅನೇಕ ಧಾರ್ಮಿಕ ಪತ್ರಿಕೆಗಳನ್ನೂ ಪ್ರಕಟಿಸಲಾಗುತ್ತಿದೆ. ಇಂಥ 15 ಮಾಸಪತ್ರಿಕೆಗಳು ಭಾರತದಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸಿವೆ.     
 
	ಸಂಘದ ಸದಸ್ಯರಾಗಲು ಅರ್ಹತೆಗಳು : 1 ಆರೋಗ್ಯವಂತರಾದ ಯುವಕರಾಗಿರಬೇಕು. ವಿದ್ಯಾಭ್ಯಾಸದ ಕನಿಷ್ಠಮಿತಿ ಎಸ್.ಎಸ್.ಎಲ್.ಸಿ. ಪದವಿ ಪಡೆದವರಿಗೆ ವಯೋಮಿತಿ ಮೂವತ್ತು ವರ್ಷದ ಒಳಗೂ ಪದವಿ ಶಿಕ್ಷಣ ಪಡೆದವರು ಇಪ್ಪತ್ತೈದು ವರ್ಷ ಒಳಗೂ ಇರಬೇಕು. 2 ಅವಿವಾಹಿತರಾಗಿದ್ದು ಅಖಂಡ ಬ್ರಹ್ಮಚಾರಿಯಾಗಿ ಉಳಿಯುವ ಹಂಬಲವುಳ್ಳವರಾಗಿರಬೇಕು. 3 ರಾಮಕೃಷ್ಣ-ವಿವೇಕಾನಂದರ ಸಾಹಿತ್ಯವನ್ನು ಸಾಕಷ್ಟು ಅಧ್ಯಯನ ಮಾಡಿರಬೇಕು. ಮತ್ತು ಯಾವುದಾದರೂ ರಾಮಕೃಷ್ಣ ಆಶ್ರಮದ ಸಂಪರ್ಕವಿದ್ದು ಆಶ್ರಮಜೀವನದ ಪರಿಚಯವಿರಬೇಕು. 4 ಯಾವುದೇ ಬಗೆಯ ಕೌಟುಂಬಿಕ ಕರ್ತವ್ಯ, ಹೊಣೆಗಳು ಇರಬಾರದು. ತಂದೆ-ತಾಯಿಗಳು ಅಥವಾ ಸಹೋದರರಿಗಾಗಿ ತನ್ನ ಕರ್ತವ್ಯವನ್ನು ನೆರವೇರಿಸಲಿಲ್ಲ ಎಂಬ ಮಾನಸಿಕ ಕ್ಲೇಶವಿರಬಾರದು. ಆಶ್ರಮಕ್ಕೆ  ಸೇರುವುದು ಸಂಸಾರದ ಹೊಣೆಯಿಂದ ಪಾರಾಗುವುದಕ್ಕೆ ಒಂದು ನೆಪವಾಗಿರಬಾರದು. 5 ಕೇವಲ ಸಂನ್ಯಾಸದ ಆದರ್ಶವನ್ನಿಟ್ಟುಕೊಂಡಿದ್ದರೆ ಸಾಲದು, ವಿವೇಕಾನಂದ ಮತ್ತು ಸಂಘದ ಆದರ್ಶಕ್ಕನುಗುಣವಾಗಿ ಕರ್ಮ, ಸಾಧನೆ ಮತ್ತು ಅಧ್ಯಯನ ಈ ಮೂರನ್ನೂ ಮೈಗೂಡಿಸಿಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. 6 ಇತರರೊಡನೆ ಹೊಂದಿಕೊಂಡು ಆಶ್ರಮದ ಎಲ್ಲ ಚಟುವಟಿಕೆಗಳಲ್ಲೂ ಭಾಗಿಗಳಾಗಿ ಯಾವುದೇ ಕಾರ್ಯವನ್ನೂ ಮಾಡಲು ಹಿಂಜರಿಯದೇ ಸಂಘಬದ್ಧ ಜೀವನವನ್ನು ನಡೆಸುವ ಯೋಗ್ಯತೆಯುಳ್ಳವರಾಗಿರಬೇಕು. 7 ರಾಮಕೃಷ್ಣರ ಆದರ್ಶ ತ್ಯಾಗ ಮತ್ತು ಸರಳ ಜೀವನ, ಈ ಆದರ್ಶಕ್ಕೆ ಅನುಗುಣವಾಗಿ ಅತಿಯಾದ ಅನುಕೂಲತೆಗಳಿಗೆ ಆಸೆಪಡದೆ  ಸಂತೃಪ್ತಿಯ ಜೀವನವನ್ನು ನಡೆಸುವಂಥವರಾಗಿರಬೇಕು. 8. ರಾಮಕೃಷ್ಣರೇ ಸಂಘದ ಆರಾಧ್ಯದೇವತೆ, ಅವರನ್ನೇ ಇಷ್ಟದೇವತೆಯನ್ನಾಗಿ, ಅವರ ಮಂತ್ರವನ್ನೇ ದೀಕ್ಷೆಯನ್ನಾಗಿ ಸ್ವೀಕರಿಸಿ, ಯಾವುದೇ ಮತೀಯ ಸಂಕುಚಿತ ಭವನೆಯೂ ಇಲ್ಲದೆ ಸಾಧನೆಯ ನಡೆಸುವಂಥವರಾಗಿರಬೇಕು. 9. ಒಮ್ಮೆ ಆಶ್ರಮಕ್ಕೆ ಸೇರಿದ ಮೇಲೆ ಯಾವುದೇ ಕೌಟುಂಬಿಕ ಸಂಪರ್ಕವನ್ನು ಇಟ್ಟುಕೊಳ್ಳಕೂಡದು. ಕುಟುಂಬದ ಆಸ್ತಿಯ ಮೇಲೆ ಯಾವ ಹಕ್ಕನ್ನೂ ಪ್ರತಿಪಾದಿಸಬಾರದು. ತಂದೆತಾಯಿಯರನ್ನು ನೋಡಿಕೊಂಡು ಬರಲು ಅಪರೂಪಕ್ಕೊಮ್ಮೆ ಮನೆಗೆ ಹೋಗಿ ಬರಲು ಅವಕಾಶವಿರುತ್ತದೆ. ಹೀಗೆ ನಿಯಮಗಳನ್ನು ಪಾಲಿಸಿ ಸಂಘವನ್ನು ಸೇರಲು ಇಚ್ಛಿಸುವವರು ಬೇಲೂರು ಮಠ ಅಥವಾ ಯಾವುದೇ ಶಾಖಾ ಕೇಂದ್ರದಲ್ಲೂ ಸೇರಬಹುದು. ಸೇರಿದ 3 ಅಥವಾ 4 ವರ್ಷಗಳಾದ ಬಳಿಕ ಅವರನ್ನು ಬೇಲೂರು ಮಠದ ತರಬೇತಿ ಕೇಂದ್ರಕ್ಕೆ ಕಳುಹಿಸಿ 2 ವರ್ಷಗಳ ವಿಶೇಷ ತರಬೇತಿ ಮತ್ತು ಅಧ್ಯಯನ ಅನಂತರ ಬ್ರಹ್ಮಚರ್ಯೆ ದೀಕ್ಷೆಯನ್ನು ನೀಡಿ. ಬೇರೆ ಕೇಂದ್ರಗಳಿಗೆ ಕಳುಹಿಸಲಾಗುವುದು. ಅನಂತರ 3 ಅಥವಾ 4 ವರ್ಷ ಕಳೆದ ಮೇಲೆ ಸನ್ಯಾಸ ದೀಕ್ಷೆ ನೀಡಲಾಗುವುದು. ಆಶ್ರಮ ಸೇರಿ ಒಂಬತ್ತು ವರ್ಷಗಳಾದ ಅನಂತರ ಅರ್ಹತೆ ಆಧಾರದ ಮೇಲೆ ವ್ಯಕ್ತಿಪೂರ್ಣ ಸನ್ಯಾಸಿಯಾಗುತ್ತಾನೆ. ಆಶ್ರಮ ಜೀವನ ಒಗ್ಗದಿದ್ದರೆ ಬಿಟ್ಟು ಹೋಗುವುದಕ್ಕೆ ಅವಕಾಶವಿದೆ.

ಸ್ವಾಮಿ ವಿವೇಕಾನಂದರು ಆಶಿಸಿದ್ದಂತೆ ಅವರ ನಿಧನದ ಬಳಿಕ ಸ್ತ್ರೀಯರಿಗಾಗಿ ಶ್ರೀ ಶಾರದಾ ಮಠ ಪ್ರಾರಂಭವಾಯಿತು (1953). ಇದರ ಪ್ರಧಾನ ಕೇಂದ್ರ ಕಲ್ಕತ್ತದ ದಕ್ಷಿಣೇಶ್ವರದಲ್ಲಿದೆ. ರಾಮಕೃಷ್ಣ ಮಹಾಸಂಘದ ಬಗೆಗಿನ ಎಲ್ಲ ನಿಯಮಗಳೂ ಇದಕ್ಕೂ ಅನ್ವಯವಾಗುತ್ತದೆ.

ನ್ಯೂಯಾರ್ಕಿನ ವೇದಾಂತ ಸೊಸೈಟಿ ಅಮೆರಿಕದಲ್ಲಿರುವ ರಾಮಕೃಷ್ಣ ಮಿಷನ್‍ನ ಅತ್ಯಂತ ಹಳೆಯ ಶಾಖೆ, ಸ್ವಾಮಿ ವಿವೇಕಾನಂದರು ಅಮೆರಿಕಾದಲ್ಲಿದ್ದಾಗ (1893) ನಡೆಸಿದ ಉಪನ್ಯಾಸಗಳ ಬಳಿಕ ಈ ಸಂಸ್ಥೆ ಅಸ್ತಿತ್ವಕ್ಕೆ ಬಂತು. 1898 ರಲ್ಲಿ ರಾಮಕೃಷ್ಣ ಮಿಷನ್ನಿನ ಅಂಗಸಂಸ್ಥೆಯಾಯಿತು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಭಾರತೀಯ ಧರ್ಮವನ್ನು ಪ್ರಚಾರಪಡಿಸುವಲ್ಲಿ ಈ ಸಂಸ್ಥೆಯ ಪಾತ್ರ ಹಿರಿದಾದುದು.

ಪಾಶ್ಚಾತ್ಯ ರಾಷ್ಟ್ರಗಳಲ್ಲಿರುವ ಕೇಂದ್ರಗಳ ಪ್ರಧಾನ ಉದ್ಧೇಶ ರಾಮಕೃಷ್ಣ ಪರಮಹಂಸರ ಬೋಧನೆಗಳನ್ನು ಪ್ರಚುರಪಡಿಸುವುದೇ ಆಗಿದೆ. ಭಾರತದಲ್ಲಿರುವ ರಾಮಕೃಷ್ಣ ಮಿಷನ್‍ನ 86 ಮಠಗಳು ವೈದ್ಯಕೀಯ, ಶೈಕ್ಷಣಿಕ ಹಾಗೂ ದೀನದಲಿತರ ಸೇವೆಯಲ್ಲಿ ತೊಡಗಿವೆ.					  						        
(ಎಲ್.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ